ಮೈಸೂರು, ಜನವರಿ 30, 2026 : ಇಲ್ಲಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (NCB) ಅಧಿಕಾರಿಗಳು ನಿನ್ನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಈ ಸಂಬಂಧ ಗಣಪತ್ ಲಾಲ್ ಎಂಬಾತನನ್ನು ಬಂಧಿಸಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದ್ದ ಗಣಪತ್ ಲಾಲ್ ಮಾದಕ ವಸ್ತು ಜಾಲದಲ್ಲಿ ತೊಡಗಿರುವ ಶಂಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಮೈಸೂರಿನ ಜಿಲ್ಲಾ ನ್ಯಾಯಾಲಯದ ಮೂರನೇ ಜೆಎಂಎಫ್‌ಸಿ (JMFC) ಮುಂದೆ ಹಾಜರುಪಡಿಸಿದ ಎನ್‌ಸಿಬಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.
ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಯನ್ನು ಕರೆದೊಯ್ದು ಹೆಚ್ಚಿನ ತನಿಖೆ ನಡೆಸಲು ಅನುಮತಿ ನೀಡಿದೆ. ಸದ್ಯ ಎನ್‌ಸಿಬಿ ತಂಡವು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಜಾಲದಲ್ಲಿ ಇನ್ನೂ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಯದುವೀರ್ ಒಡೆಯರ್, ಅಲ್ಲಿ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗದಿದ್ದರೂ, ಮಾದಕ ದ್ರವ್ಯ ಜಾಲದ ತನಿಖೆಗಳು ಪದೇ ಪದೇ ಮೈಸೂರಿನತ್ತಲೇ ಬೆರಳು ತೋರಿಸುತ್ತಿವೆ. ಸಂಸ್ಕೃತಿ ಮತ್ತು ಪರಂಪರೆಗೆ ಹೆಸರಾಗಿದ್ದ ನಗರವು ಇಂದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಾದಕ ದ್ರವ್ಯ ತನಿಖೆಗಳಿಂದಾಗಿ ಅಪಖ್ಯಾತಿ ಪಡೆಯುವಂತಾಗಿದೆ. ಇದು ಕೇವಲ ಕಾಕತಾಳೀಯವಲ್ಲ; ಇದು ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಮತ್ತು ದುರ್ಬಲ ಆಡಳಿತದ ನೇರ ಫಲಿತಾಂಶವಾಗಿದೆ ಎಂದು ಮೈಸೂರಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
