ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರ ಮೀಸಲಾತಿ ಹೇಳಿಕೆಯನ್ನು ತಿರುಚಿ ವಿಡಿಯೋ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಗೆ ದೆಹಲಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ರೇವಂತ್ ರೆಡ್ಡಿ ಸೇರಿದಂತೆ ತೆಲಂಗಾಣ ಮೂಲದ ಇತರ ನಾಲ್ವರಿಗೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ನೋಟಿಸ್‌ಗೆ ಪ್ರತಿಕ್ರಿಯಿಸಿದ ರೇವಂತ್ ರೆಡ್ಡಿ, ಬಿಜೆಪಿ ಸಿಬಿಐ, ಜಾರಿ ನಿರ್ದೇಶನಾಲಯವನ್ನು ಬಳಸುತ್ತಿತ್ತು. ಈಗ ದೆಹಲಿ ಪೊಲೀಸರ ಮೂಲಕ ವಿರೋಧಿ ಪಕ್ಷಗಳನ್ನು ನಿಯಂತ್ರಿಸಲು ಮುಂದಾಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಟೀಕಿಸಿದರು.
ದೂರುಗಳ ನಂತರ ಪೊಲೀಸರು ಐಪಿಸಿ ಸೆಕ್ಷನ್ 153, 153 ಎ, 465, 469, 171 ಜಿ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವೀಡಿಯೊವನ್ನು ಅಪ್‌ಲೋಡ್ ಮಾಡಿದ ಮತ್ತು ಹಂಚಿಕೊಂಡ ಖಾತೆಗಳ ಬಗ್ಗೆ ಮಾಹಿತಿ ಕೋರಿ ಪೊಲೀಸರು ಎಕ್ಸ್ ಮತ್ತು ಫೇಸ್‌ಬುಕ್‌ಗೆ ನೋಟಿಸ್ ಕಳುಹಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಅರೆಸ್ಟ್:
ಅಮಿತ್ ಶಾ ಅವರ ಫೇಕ್ ವಿಡಿಯೋವನ್ನು ಅಪ್ಲೋಡ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತನನ್ನು ಅರೆಸ್ಟ್ ಮಾಡಲಾಗಿದೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.
