ಮೈಸೂರು, ಜನವರಿ 22, 2025: ರಾಜ್ಯದ ಸಿಎಂ ಮತ್ತು ಪ್ರಭಾವಿ ಸಚಿವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕ್ರೀಡಾಪಟುಗಳಿಗಿಲ್ಲ ಕ್ರೀಡಾಂಗಣ. ಮೈಸೂರು ಜಿಲ್ಲೆಯ ವರುಣ ಮತ್ತು ಟಿ ನರಸೀಪುರ ಎರಡು ಕ್ಷೇತ್ರಕ್ಕೂ ಸೇರಿಕೊಂಡಿರುವ ಟಿ ನರಸೀಪುರ ಪಟ್ಟಣದಲ್ಲಿ ಕ್ರೀಡಾಂಗಣಕ್ಕಾಗಿ ಕ್ರೀಡಾಪಟುಗಳು ಹಾತೊರೆಯುತ್ತಿದ್ದರೂ, ಜನಪ್ರತಿನಿಧಿಗಳು ಮಾತ್ರ ಯಾರೂ ಕೂಡಾ ಕ್ಯಾರೆ ಎನ್ನುತ್ತಿಲ್ಲ.
ಟಿ ನರಸೀಪುರ ತಾಲ್ಲೂಕನ್ನ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿರುವ ಅನೇಕ ಕ್ರೀಡಾಪಟುಗಳು ಇಲ್ಲಿದ್ದಾರೆ. ಇತ್ತೀಚೆಗೆ ಭಾರತ ಮಹಿಳಾ ಖೋಖೋ ತಂಡಕ್ಕೆ ಆಯ್ಕೆಯಾಗಿ ಪ್ರಶಸ್ತಿ ಗೆಲ್ಲುವಲ್ಲಿ ಗಮನಾರ್ಹ ಸಾಧನೆಗೈದಿರುವ ಕ್ರೀಡಾಪಟು ಚೈತ್ರ ಕೂಡ ಟಿ ನರಸೀಪುರ ಕ್ಷೇತ್ರದವರೇ. ಈ ಕ್ಷೇತ್ರದಲ್ಲಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ವರುಣ ಕ್ಷೇತ್ರದಿಂದ ಶಾಸಕರಾಗಿ ಸಿಎಂ ಆಗಿರುವ ಸಿದ್ದರಾಮಯ್ಯ, ಮತ್ತು ಟಿ ನರಸೀಪುರ ಕ್ಷೇತ್ರದಿಂದ ಶಾಸಕರಾಗಿ ಸಚಿವರಾಗಿರುವ ಡಾ. ಹೆಚ್ ಸಿ ಮಹದೇವಪ್ಪ ಇಬ್ಬರು ಪ್ರಭಾವಿ ನಾಯಕರು ಪ್ರತಿನಿಧಿಸುತ್ತಿರುವ ಕ್ಷೇತ್ರ ಇದಾಗಿದೆ. ಟಿ ನರಸೀಪುರ ಪುರಸಭೆಯ ಒಟ್ಟು 23 ವಾರ್ಡ್ ಪೈಕಿ, 16ವಾರ್ಡ್ ಗಳು ವರುಣ, 7 ವಾರ್ಡ್ ಗಳು ಟಿ ನರಸೀಪುರ ಕ್ಷೇತ್ರಕ್ಕೆ ಹಂಚಿಕೆಯಾಗಿವೆ. ತಾಲ್ಲೂಕು ಕ್ರೀಡಾಂಗಣಕ್ಕಾಗಿ ಕ್ರೀಡಾಪಟುಗಳು, ಟಿ ನರಸೀಪುರದ ಜನತೆ ಹಾತೊರೆಯುತ್ತಿದ್ದರೂ ಕ್ಷೇತ್ರದ ನಾಯಕರು ಮಾತ್ರ ಕ್ರೀಡಾಂಗಣ ನಿರ್ಮಾಣಕ್ಕೆ ಉತ್ಸಾಹ ತೋರದ ಹಿನ್ನೆಲೆ ಸಾರ್ವಜನಿಕರು ಬೇಸರ ಹೊರ ಹಾಕಿದ್ದಾರೆ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ, ಮೂರು ಬಾರಿ ಟಿ ನರಸೀಪುರದಿಂದ ಶಾಸಕರಾಗಿ ಡಾ. ಹೆಚ್ ಸಿ ಮಹದೇವಪ್ಪ ಆಯ್ಕೆಯಾಗಿದ್ದಾರೆ. ಅತ್ತ ವರುಣ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾಗಿ ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ರಾಜ್ಯದ ಪವರ್ ಫುಲ್ ಸಿಎಂ, ಪವರ್ ಫುಲ್ ಮಿನಿಸ್ಟರ್ ಕ್ಷೇತ್ರದವರೇ ಆದರೂ ಕ್ಷೇತ್ರದಲ್ಲಿ ಮಾತ್ರ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗದ ಡಾ. ಹೆಚ್ ಸಿ ಮಹದೇವಪ್ಪ, ಸಿದ್ದರಾಮಯ್ಯ ವಿರುದ್ಧ ಕ್ಷೇತ್ರದ ಜನರು ಆಕ್ರೋಶ ಹೊರಹಾಕಿದ್ದಾರೆ.
