ಮಂಗಳೂರು (ಡಿ.12): ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಳಚ್ಚಿಲ್‌ನ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಡಿ.8ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೇರಳದ ಅಲೆಪ್ಪಿ ನಿವಾಸಿ ಸಚಿನ್ ಸಾಜು (19) ಮೃತ ವಿದ್ಯಾರ್ಥಿ. ಶ್ರೀನಿವಾಸ್ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಅವರು ಕಳೆದ ನ.30ರಂದು ಕಾಲೇಜು ಪ್ರವೇಶ ಪಡೆದಿದ್ದರು. ಡಿ.8ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ನಡುವೆ ಹಾಸ್ಟೆಲ್ ಕೋಣೆಯಲ್ಲಿ ಬೆಡ್‌ಶೀಟ್ ಬಳಸಿ ನೇಣು ಹಾಕಿಕೊಂಡಿದ್ದಾರೆ.
ಆತ್ಮಹತ್ಯೆಗೆ ಖಿನ್ನತೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗಿಂತ ಹಿಂದಿನ ಎರಡು ದಿನ ಅವರು ತರಗತಿಗೆ ಹಾಜರಾಗಿರಲಿಲ್ಲ. ಹಾಸ್ಟೆಲ್‌ನಲ್ಲಿ ರೂಮ್‌ಮೇಟ್‌ಗಳು ಇಲ್ಲದಿರುವ ಸಮಯ ನೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
