ಯರೆಮನುಗನಹಳ್ಳಿ ಗ್ರಾಮದ ಕೆರೆ ಇದೀಗ ಹೂಳು ತುಂಬಿ ಹಾಳು
ವಿನಯ್ ದೊಡ್ಡಕೊಪ್ಪಲು ಹೊಸೂರು
ಅಂತರ್ಜಲ ಹೆಚ್ಚಿಸಲು ಸಹಕಾರಿ ಅಗಬೇಕಿದ್ದ ಕೆರೆ ಒಂದು ನೀರಾವರಿ ಇಲಾಖೆ ಮತ್ತು ಗ್ರಾ.ಪಂ.ನ ಅಧಿಕಾರಿಗಳ ನಿರ್ಲಕ್ಷ ದಿಂದ ಹೂಳು ತುಂಬಿ ಕೊಂಡು ಅಭಿವೃದ್ಧಿ ಭಾಗ್ಯಕ್ಕಾಗಿ ಎದುರು ನೋಡುತ್ತಿದೆ.
ಸಾಲಿಗ್ರಾಮ ತಾಲೂಕಿನ ಗಡಿ ಭಾಗದಲ್ಲಿ ಇರುವ ಯರೆಮನುಗನಹಳ್ಳಿ ಗ್ರಾಮದ ಕೆರೆ ಇದೀಗ ಹೂಳು ತುಂಬಿಕೊಂಡು ಗಿಡಗಂಟೆಗಳು ಬೆಳೆದು ಕೆರೆ. ತನ್ನ ಮೂಲ ಸ್ವರೂಪವನ್ನು ಕಳೆದು ಕೊಂಡು ಗ್ರಾಮಸ್ಥರ ಉಪಯೋಗಕ್ಕೆ ಮತ್ತು ರೈತರಿಗೆ ವ್ಯವಸಾಯಕ್ಕೆ ಅನುಕೂಲಕ್ಕೆ ಬಾರದಂತೆ ಆಗಿದೆ.
ಈ ಕೆರೆಯು ಸುಮಾರು ೧೪ ಎಕರೆ ವಿಸ್ತೀರ್ಣವನ್ನು ಹೊಂದಿದ್ದು ನಾಲೆಯ ನೀರು ಮತ್ತು ಮಳೆಯ ನೀರನ್ನು ಆಶ್ರಯಿಸಿದ್ದು ಇದೀಗ ಹೂಳು ತುಂಬಿ ಕೊಂಡಿರುವ ಪರಿಣಾಮವಾಗಿ ಕೆರೆಯಲ್ಲಿ ನೀರಿಲ್ಲದೇ ಬಣಗೂಡುತ್ತಿದ್ದು ಹಾರಂಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಈ ಕೆರೆಯ ಅಭಿವೃದ್ದಿ ಮರಿಚಿಕೆ ಆಗಿದೆ.
ಕೆರೆ ನಿರ್ಮಾಣಗೊಂಡ ನಂತರ ಇಲ್ಲಿ ಒಂದು ಸೋಪಾನ ಕಟ್ಟೆ ನಿರ್ಮಾಣ ಆಗಿದ್ದು ಬಿಟ್ಟರೇ, ಇನ್ನು ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ ಇರುವ ಪರಿಣಾಮ ನೀರಿನ ಸಂಗ್ರಹಕ್ಕೆ ತೊಡಕ್ಕಾಗಿದ್ದು ಇದರಿಂದ ಕೆರೆಯ ಅಕ್ಕ ಪಕ್ಕದ ಜಮೀನುಗಳಿಗೆ ವ್ಯವಸಾಯಕ್ಕು ನೀರಿಲ್ಲದಂತೆ ಆಗಿದೆ.
ಮೀನುಗಾರಿಕೆಗೂ ತೊಂದರೆ : ಈ ಕೆರೆಯನ್ನು ಅಭಿವೃದ್ದಿ ಪಡಿಸಿದರೇ ಮೀನುಗಾರಿಕೆಗೆ ಅವಕಾಶ ಇದ್ದು, ಇಲ್ಲಿ ಹುಳು ತುಂಬಿ ಗಿಡ ಗಂಟೆಗಳು ಬೆಳೆದು ಮೀನುಗಾರಿಕೂ ಅವಕಾಶ ಇಲ್ಲದಂತೆ ಆಗಿದ್ದು ಇದರಿಂದ ವಾರ್ಷಿಕವಾಗಿ ಆದಾಯ ಮೀನುಗಾರಿಕೆ ಇಲಾಖೆ ಮತ್ತು ಚನ್ನಂಗೆರೆ ಗ್ರಾ.ಪಂ.ಗೆ ಇಲ್ಲದಂತೆ ಆಗಿದೆ. ಈ ಕೆರೆಯನ್ನು ಗ್ರಾ.ಪಂ.ಅವರು ಮತ್ತು ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ವಿವಿಧ ಅನುದಾನದಲ್ಲಿ ಅಭಿವೃದ್ದಿ ಪಡಿಸುವ ಅವಕಾಶ ಇದ್ದರು ಸಹ, ಅಭಿವೃದ್ದಿ ಮರೆತ್ತಿರುವ ಪರಿಣಾಮವಾಗಿ ಕೆರೆ ಇನ್ನಷ್ಟು ಒತ್ತುವರಿಯಾಗಿ ಕೆರೆಯ ವಿಸ್ತಿರ್ಣ ದಿನದಿಂದ ದಿನಕ್ಕೆ ಒತ್ತುವರಿಯಾಗುವಂತೆ ಆಗಿದೆ.
ಈಗಲಾದರು ಹಾರಂಗಿ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಚನ್ನಂಗೆರೆ ಗ್ರಾ.ಪಂ.ಅವರು ಈ ಕೆರೆಯ ಅಭಿವೃದ್ದಿ ಪಡಿಸಿದರೇ ಜಾನುವಾರುಗಳಿಗೆ ಕುಡಿಯುವ ನೀರು, ಅಂತರ್ಜಲ ಹೆಚ್ಚಿಸುವುದು ಮತ್ತು ಮೀನುಗಾರಿಕೆ ಸಹಕಾರಿಯಾಗಿಯಾಗಲಿದ್ದು ಜತಗೆ ಕೃಷಿ ಚಟುವಟಿಗೂ ಸಹಕಾರಿ ಆಗಲಿದೆ.
