ನಂಜನಗೂಡು, ಫೆಬ್ರವರಿ 2, 2026 : ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯು ಮತ್ತೆ ಕೋಟಿಯ ಒಡೆಯನಾಗಿದ್ದಾನೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಭಕ್ತಾದಿಗಳು ಬರೊಬ್ಬರಿ 2 ಕೋಟಿ 46 ಲಕ್ಷದ 28 ಸಾವಿರ ರೂಪಾಯಿಗಳನ್ನು ಹುಂಡಿ ಕಾಣಿಕೆಯಾಗಿ ಸಮರ್ಪಿಸಿದ್ದಾರೆ.

ಇತ್ತೀಚೆಗೆ ನಡೆದ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ನಗದು ಮಾತ್ರವಲ್ಲದೆ, ಭಕ್ತಿಯ ಕಾಣಿಕೆಯಾಗಿ 50 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯನ್ನು ಭಕ್ತರು ಅರ್ಪಿಸಿರುವುದು ಕಂಡುಬಂದಿದೆ. ಇದರೊಂದಿಗೆ ವಿವಿಧ ದೇಶಗಳ ವಿದೇಶಿ ಕರೆನ್ಸಿಗಳು ಕೂಡ ಹುಂಡಿಯಲ್ಲಿ ಸಂಗ್ರಹವಾಗಿವೆ. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಯಾದ ಕೃಷ್ಣ ಅವರ ನೇತೃತ್ವದಲ್ಲಿ, ವಿವಿಧ ಬ್ಯಾಂಕ್‌ಗಳ ಸಿಬ್ಬಂದಿಗಳು ಹಾಗೂ ದೇವಸ್ಥಾನದ ಸಿಬ್ಬಂದಿಗಳ ಸಮ್ಮುಖದಲ್ಲಿ ಬಿಗಿ ಭದ್ರತೆಯೊಂದಿಗೆ ಈ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಲಾಯಿತು. ಭಕ್ತರ ಸಂಖ್ಯಾ ಹೆಚ್ಚಳ ಮತ್ತು ಹರಕೆಗಳ ಸಲ್ಲಿಕೆಯಿಂದಾಗಿ ಈ ಬಾರಿ ಕಾಣಿಕೆ ಮೊತ್ತದಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
