ಬೆಂಗಳೂರು, ಜ 11: ರಾಜ್ಯಾದ್ಯಂತ ಆರೋಗ್ಯ ಇಲಾಖೆ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿ, ಭ್ರೂಣದ ಲಿಂಗ ಪತ್ತೆ ಮಾಡಿ ಬಹಿರಂಗಪಡಿಸುವಂತಹ ಅಕ್ರಮ ಚಟುವಟಿಕೆಗಳ ಆರೋಪದ ಮೇಲೆ 34 ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಮುಚ್ಚಿದ್ದಾರೆ. ದಾಳಿ ವೇಳೆ ಅಧಿಕಾರಿಗಳು 156 ಮಂದಿ ನಕಲಿ ವೈದ್ಯರನ್ನೂ ಪತ್ತೆ ಹಚ್ಚಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಭ್ರೂಣದ ಅಕ್ರಮ ಲಿಂಗ ಪತ್ತೆ ಮತ್ತು ಗರ್ಭಪಾತ ಪ್ರಕರಣಗಳ ಬಗ್ಗೆ ತಿಳಿಯಲು ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳು ಮತ್ತು ಕ್ಲಿನಿಕ್‌ಗಳಲ್ಲಿ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆಯು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಸಮುದಾಯ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದೆ. 5,083 ಸ್ಕ್ಯಾನಿಂಗ್ ಸೆಂಟರ್‌ಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಒಂದು ತಿಂಗಳ ಕಾಲ ತಪಾಸಣೆ ನಡೆಸಿದ ನಂತರ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಅಕ್ರಮಗಳನ್ನೆಸಗಿದ ಆರೋಪದ ಮೇಲೆ 34 ಸ್ಕ್ಯಾನಿಂಗ್ ಕೇಂದ್ರಗಳನ್ನು ಮುಚ್ಚಲಾಗಿದೆ ಮತ್ತು ವಿವಿಧ ವ್ಯತ್ಯಾಸಗಳ ಕುರಿತು 429 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಸ್ಕ್ಯಾನಿಂಗ್ ಕೇಂದ್ರಗಳನ್ನು ಮುಚ್ಚಲಾಗಿದೆ.
