ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಜಾರಿಯಾಗಿ ಮೂರು ತಿಂಗಳು ಕಳೆದಿವೆ. ಈ ಯೋಜನೆ ಅಡಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ (Government Bus) ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ಪ್ರಯಾಣ ಜಾರಿಯಾಗುತ್ತಿದ್ದಂತೆ ಸಭೆ, ಸಮಾರಂಭ ಮತ್ತು ಪುಣ್ಯಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಇದರಿಂದ ನಾಲ್ಕು ನಿಗಮಗಳಿಗೆ ಆದಾಯ ಹೆಚ್ಚಿದೆ. ಕಳೆದ ಮೂರು ತಿಂಗಳಲ್ಲಿ ಕೆಎಸ್ಆರ್ಟಿಸಿ (KSRTC) ಬಸ್ಗಳಲ್ಲಿ 70,73,05,946 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1648,51,39,030 ಆಗಿದೆ. ನಿಗಮಗಳಿಗೆ ಆದಾಯವೇನೋ ಹೆಚ್ಚಿದೆ ಆದರೆ ನಿರ್ವಾಹಕರಿಗೆ (ಕಂಡಕ್ಟರ್)ಗಳಿಗೆ ತಲೆಬಿಸಿ ಶುರುವಾಗಿದೆ.
ಶಕ್ತಿ ಯೋಜನೆ ಜಾರಿಯದ ಬಳಿಕ ಮಹಿಳಾ ಪ್ರಯಾಣಿಕರ ಎಡವಟ್ಟಿನಿಂದ ಮತ್ತು ನಿರ್ವಾಹಕರ ಸ್ವಯಂಕೃತ ತಪ್ಪಿನಿಂದ ರಾಜ್ಯದಲ್ಲಿ ಇದುವರೆಗೂ ನಾಲ್ಕೂ ನಿಗಮ ಸೇರಿ ಒಟ್ಟು 300 ಕ್ಕೂ ಅಧಿಕ ಮಂದಿ ನಿರ್ವಾಹಕರನ್ನು ಸಾರಿಗೆ ಇಲಾಖೆ ಸಸ್ಪೆಂಡ್ ಮಾಡಿದೆ ಎಂದು ಟಿವಿ9 ಡಿಜಿಟಲ್ಗೆ ಓರ್ವ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮಾಹಿತಿ ನೀಡಿದ್ದಾರೆ.