ಇಲ್ಲಿ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ನಡೆಯಲಿದ್ದು, ಇದರ ಪರಿಣಾಮ ನಗರದ ಹೋಟೆಲ್ ಹಾಗೂ ವಿಮಾನ ಟಿಕೆಟ್ ದರ ಗಗನಕ್ಕೇರಿದೆ. ನಗರದಲ್ಲಿ ಕೆಲ ಪಂಚತಾರಾ ಹೋಟೆಲ್‌ಗಳ ಒಂದು ರಾತ್ರಿಯ ದರ ಬರೋಬ್ಬರಿ ₹2 ಲಕ್ಷಕ್ಕೂ ಹೆಚ್ಚಿದೆ. ಅಹಮದಾಬಾದ್ ಮಾತ್ರವಲ್ಲದೇ ಸಮೀಪದ ನಗರಗಳಲ್ಲೂ ದರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಸಾಮಾನ್ಯ ಹೋಟೆಗಳ ದರ ಕೂಡಾ ಒಂದು ರಾತ್ರಿಗೆ 20,000ರು. ವರೆಗೆ ಹೆಚ್ಚಳವಾಗಿದೆ. ‘ದುಬೈ, ಆಸ್ಟ್ರೇಲಿಯಾ, ಅಮೆರಿಕ ದಿಂದಲೂ ಅಭಿಮಾನಿಗಳು ಬರುತ್ತಿದ್ದಾರೆ. ಸುಮಾರು 30 ರಿಂದ 40 ಸಾವಿರ ಮಂದಿ ಹೊರಗಿನಿಂದ ಬರುವ ನಿರೀಕ್ಷೆಯಿದೆ. ಹೀಗಾಗಿ ದರ 5ರಿಂದ 7 ಪಟ್ಟು ಹೆಚ್ಚಳವಾಗಿದೆ’ ಎಂದು ಹೋಟೆಲ್ ಮಾಲಕರೊಬ್ಬರು ತಿಳಿಸಿದ್ದಾರೆ. ಇನ್ನು ನಗರಕ್ಕೆ ಆಗಮಿಸುವ ವಿಮಾನ ದರದಲ್ಲೂ ಭಾರೀ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಅಹಮದಾಬಾದ್‌ಗೆ ಸರಾಸರಿ 5000-6000 ಇರುವ ವಿಮಾನ ದರ ಶನಿವಾರಕ್ಕೆ 25000ರಿಂದ 33000 ರುಪಾಯಿವರೆಗೂ ಇದೆ.